1858-1940. ಸ್ವೀಡಿಷ್ ಕಾದಂಬರಿಗಾರ್ತಿ. ಸಾಹಿತ್ಯಕ್ಕಾಗಿ ನೊಬೆಲ್ ಪಾರಿತೋಷಿಕ ಪಡೆದ ಪ್ರಪಂಚದ ಪ್ರಥಮ ಮಹಿಳೆ. ದಕ್ಷಿಣ ಸ್ವೀಡನ್‍ನ ವಾರ್ಮ್‍ಲೆಂಡಿನಲ್ಲಿ 1858ರಲ್ಲಿ ಸುಸಂಸ್ಕøತ ಮನೆತನದಲ್ಲಿ ಹುಟ್ಟಿದಳು.  ತಂದೆ ಲೆಫ್ಟಿನೆಂಟ್ ಎರಿಕ್ ಲಾಗರ್‍ಲ್ಯೂಫ್ ಸೇನಾಧಿಕಾರಿಗಳ ವಂಶದವ. ತಾಯಿ ಲೂಯಿಸಾವಾಲ್‍ರತ್. ಆಕೆಯ ಪೂರ್ವಿಕರು ಕಲಾವಿದರೂ ಧರ್ಮಬೋಧಕರೂ ಆಗಿದ್ದವರು. ಮೂರನೆಯ ವಯಸ್ಸಿನಲ್ಲೇ ಸೆಲ್ಮಾ ಪೋಲಿಯೋಗೆ ತುತ್ತಾದಳು. ಬಾಲ್ಯವೆಲ್ಲ ಚಿಕಿತ್ಸೆ, ಶುಶ್ರೂಷೆಗಳಿಗಾಗಿ ಆರೋಗ್ಯಧಾಮಗಳಲ್ಲಿ ಉಷ್ಣಪ್ರದೇಶಗಳಲ್ಲಿ ಕಳೆಯಿತು. ಇದರ ಪರಿಣಾಮವಾಗಿ ಈಕೆ ಜೀವನಪರ್ಯಂತ ಹೆಳವಿಯಾಗಿರಬೇಕಾಯಿತು. ಆ ಕಾರಣಕ್ಕಾಗಿ ಶಾಲೆಗೆ ಕೂಡ ಹೋದವಳಲ್ಲ. ಮನೆಯಲ್ಲಿಯೇ ಶಿಕ್ಷಣ ಪಡೆದಳು.

ಮಕ್ಕಳಲ್ಲಿ ಸಹಜವಾಗಿರುವ ಕಥೆ ಕೇಳುವ ಹುಚ್ಚು ಈಕೆಯಲ್ಲಿ ಅಸಾಧಾರಣವಾಗಿತ್ತು. ಈಕೆಯ ಅಜ್ಜಿ ಜನಪದ ಕಥೆಗಳ ಭಂಡಾರವೇ ಆಗಿದ್ದಳು. ಅಜ್ಜಿ ಹೇಳುತ್ತಿದ್ದ ನೂರಾರು ರಮ್ಯಕತೆಗಳು ಈಕೆಯ ನೆನಪಿನಲ್ಲಿ ಉಳಿದು ಮುಂದೆ ಈಕೆ ಬರೆದ ಸುಂದರವಾದ ಕಥೆ ಕಾದಂಬರಿಗಳಿಗೆ ವಸ್ತುಗಳನ್ನೊದಗಿಸಿದುವು. ಹೀಗೆ ಎಳೆತನದಿಂದಲೇ ಈಕೆಗೆ ಸಾಹಿತ್ಯದ ಒಲವು ಅಂಟಿಕೊಂಡಿತು. ಈಕೆಯ ಮನಸ್ಸನ್ನು ಮೊದಲು ಸೆಳೆದದ್ದು ನಾಟಕ. ಆದರೆ ಈಕೆ ಮೊದಲು ಬರೆದದ್ದು ಕವನ. ಜನಪದ ಕಥೆಗಳು, ಸ್ವೀಡನ್ ಹಾಗೂ ಐಸ್‍ಲೆಂಡಿನ ವಂಶಪೂರ್ವಿಕರ ವೀರಗಾಥೆಗಳು ತೆರೆದ ಕಿನ್ನರ ಲೋಕ, ಅದ್ಭುತರಮ್ಯ ಕಲ್ಪನಾ ವಿಲಾಸಗಳು ಈಕೆಯ ಮನಸ್ಸಿನ ಮೇಲೆ ಗಾಢವಾದ ಪ್ರಭಾವವನ್ನು ಬೀರಿದವು.
ಈಕೆ ತನ್ನ 20ನೆಯ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಳು. ಮನೆ, ಆಸ್ತಿಪಾಸ್ತಿಗಳನ್ನು ಮಾರಬೇಕಾಗಿಬಂತು. ಆರ್ಥಿಕ ಸಂಕಷ್ಟದಲ್ಲಿ ಬಳಲಿದಳು. ಇಂಥ ದಿನಗಳಲ್ಲೇ ಸ್ಟಾಕ್‍ಹೋಮ್‍ನಲ್ಲಿದ್ದು ಅಲ್ಲಿಯ ರಾಯಲ್ ವಿಮೆನ್ಸ್ ಟ್ರೇನಿಂಗ್ ಕಾಲೇಜಿನಲ್ಲಿ ಶಿಕ್ಷಣ ತರಬೇತಿ ಪಡೆದು ಪದವೀಧರೆಯಾದಳು. ಅನಂತರ 1885-95ರ ತನಕ ಸ್ವೀಡನ್ನಿನ ಲ್ಯಾಂಡ್ ಸ್ಕ್ರೋನಾದಲ್ಲಿ ಶಿಕ್ಷಕಿಯಾಗಿ ದುಡಿದಳು. ಇದೇ ಅವಧಿಯಲ್ಲಿ ಈಕೆ ತನ್ನ ಮೊದಲ ಕೃತಿ ಗೋಸ್ಟಾ ಬೆರ್ಲಿಂಗ್ಸ್ ಸಾಗಾ (1891) ಎಂಬ ಕಾದಂಬರಿ ಬರೆದದ್ದು. ಇದು ಇವಳ ಸಾಹಿತ್ಯ ಪ್ರತಿಭೆಯನ್ನು ಪ್ರಕಟಗೊಳಿಸಿತು. 1898ರಲ್ಲಿ ಇದರ ಇಂಗ್ಲಿಷ್ ಅನುವಾದ ಪ್ರಕಟವಾಯಿತು. 1820ರ ಕಾಲದ ಹಿನ್ನೆಲೆಯಲ್ಲಿ ಕಾದಂಬರಿಯ ಕಥೆ ಹಲವು ಜೀವನ ಚಿತ್ರಗಳನ್ನು ಸವಿವರವಾಗಿ ಪ್ರಸ್ತುತಪಡಿಸುತ್ತದೆ. ಓದುಗರನ್ನು ಸಂಬೋಧಿಸಿ ನೇರವಾಗಿ ಕಥೆಹೇಳುವ ಆತ್ಮೀಯ ಶೈಲಿ, ಭಾವ ಗೀತಾತ್ಮಕವಾದ ಭಾಷೆ, ಹೊಸ ಬಗೆಯ ವಾಸ್ತವಿಕ ಕಥನ ಕಾದಂಬರಿಯ ಯಶಸ್ಸಿಗೆ ಕಾರಣಗಳು. ಜಾಜ್ ಬ್ರಾಂಡೆ ಎಂಬ ವಿಮರ್ಶಕ ಈ ಕೃತಿಯ ವಸ್ತು ಹಾಗೂ ನಿರೂಪಣೆಗಳಲ್ಲಿಯ ಸ್ವಂತಿಕೆಯನ್ನು ಮೆಚ್ಚಿ ವಿಮರ್ಶಾವಲೋಕನವನ್ನು ಬರೆದ ಮೇಲೆ ಈ ಕೃತಿ ಬಹುಜನ ಪ್ರಿಯವಾಯಿತು. ಉಚ್ಚಕುಲೀನ ಸಿರಿವಂತರೆಲ್ಲ ತಮ್ಮ ಬಾಳನ್ನು ನೈತಿಕ ಸಾಮಾಜಿಕ ಉದಾತ್ತಧ್ಯೇಯ ಸಾಧನೆಗೆ ಮುಡಿಪಿಡುವ ಸಂಕಲ್ಪ ಮಾಡುವುದರಲ್ಲಿ ಮುಕ್ತಾಯವಾಗುವ ಈ ಕಾದಂಬರಿ ತನ್ನ ನೈತಿಕ ಉದ್ದೇಶವನ್ನು ಮರೆಮಾಚದೆ ಸ್ಪಷ್ಟಪಡಿಸುತ್ತದೆ. ಈಕೆಯ ಎಲ್ಲ ಕೃತಿಗಳಲ್ಲೂ ಸಾಮಾನ್ಯವಾಗಿ ಕಾಣುವ ಈಕೆಗೆ ಚಿರಪರಿಚಿತವಾಗಿದ್ದ ವಾರ್ಮ್‍ಲೆಂಡ್ ಮತ್ತು ಡೇಲ್ ಕಾರ್ಲಿಯ ಹಿನ್ನೆಲೆಯ ಪ್ರಾದೇಶಿಕ ಜೀವನ ಚಿತ್ರಣ ಈ ಮೊದಲ ಕಾದಂಬರಿಯಿಂದಲೇ ಆರಂಭವಾಗುತ್ತದೆ.  ಮುಂದೆ  ಬಂದ  ಎಲ್ಲ ಸವಿಸ್ತಾರವಾದ ಕಾದಂಬರಿಗಳಲ್ಲೂ ಪ್ರಾದೇಶಿಕ ನಿಸರ್ಗಚಿತ್ರ, ಸಾಂಸ್ಕøತಿಕ ಪರಂಪರೆ, ಜನಪದ ಕಥೆ, ಪುರಾಣಗಳ ಸತ್ತ್ವ ಸೆರೆಹಿಡಿಯಲ್ಪಟ್ಟಿವೆ.

1894ರಲ್ಲಿ ಒಸಿನ್‍ಲಿಗಾಲ್ಯಾಂಕರ್ ಎಂಬ ಕೃತಿ ಬಂದಿತು. ಇದು ಹಲವು ಸಾಮಾಜಿಕ ದೋಷಗಳ ವಿರುದ್ಧ ದನಿಯೆತ್ತಿದ ಕಾದಂಬರಿ. ಇದು ಕೂಡ ಈಕೆಗೆ ಸಾಕಷ್ಟು ಯಶಸ್ಸು ತಂದುಕೊಟ್ಟಿತು.  1895ರಲ್ಲಿ  ಈಕೆ ಶಿಕ್ಷಕಿಯ ಕೆಲಸ ಬಿಟ್ಟು ತನ್ನನ್ನು ಸಂಪೂರ್ಣವಾಗಿ ಸಾಹಿತ್ಯರಚನೆಗೆ ತೊಡಗಿಸಿಕೊಂಡಳು. ಇಟಲಿ, ಗ್ರೀಸ್, ಪ್ಯಾಲಸ್ತೀನ್ ಮತ್ತು ಈಜಿಪ್ಟ್‍ದೇಶ ಗಳಲ್ಲಿ ಅಧ್ಯಯನ ಪ್ರವಾಸ ಮಾಡುವ ಅವಕಾಶ ಲಭಿಸಿದಾಗ ಆ ಅನುಭವದ ಹಿನ್ನೆಲೆಯಲ್ಲಿ ಸಿಸಿಲಿಯ ಜೀವನ ಚಿತ್ರಣವನ್ನು ವಸ್ತುವಾಗಿಸಿ ಆ್ಯಂಟಿಕ್ರಿಸ್ವಾಮಿರಾಕ್ಲರ್ ಎಂಬ ಕೃತಿಯನ್ನು ರಚಿಸಿದಳು. ಇದು ಸ್ವೀಡಿಷ್ ಸಾಹಿತ್ಯದಲ್ಲಿ ವಿಚಾರ ಪ್ರಧಾನವಾದ ಕೆಲವೇ ಶ್ರೇಷ್ಠ ಕಾದಂಬರಿಗಳಲ್ಲೊಂ ದೆಂದು ಪರಿಗಣಿತವಾಗಿದೆ. ಇದರ ಅನಂತರ ಡ್ರಾಟಿನಿಂಗರ್ ಐ ಕುಂಗ ಹ್ಯಾಲ್ಲಾ(1899), ಐ ಡಾಲಾರ್ನೆ (1901), ಐ ಡೆಟ್ ಹೆಲಿಗಾ ಲಾಂಡೆಟ್ (1902) ಎಂಬ ಕಾದಂಬರಿಗಳು ಪ್ರಕಟವಾದವು. ಕಡೆಯ ಎರಡು ಕಾದಂಬರಿಗಳು ಇಂಗ್ಲಿಷ್ ಅನುವಾದದಲ್ಲಿ ಜೆರುಸಲೆಮ್(1915) ಎಂಬ ಹೆಸರಿನಲ್ಲಿ ಎರಡು ಸಂಪುಟಗಳ ಮಹಾಕಾದಂಬರಿಯಾಗಿ ಪ್ರಕಟ ವಾಯಿತು. ಇದು ಈಕೆಯ ಎರಡನೆಯ ಆಚಾರ್ಯ ಕೃತಿ. ಡೇಲ್ ಕಾರ್ಲಿಯದಿಂದ ಜೆರೂಸಲೆಮ್‍ಗೆ ತೀರ್ಥಯಾತ್ರೆ ಹೋದ ಕೆಲವು ಧಾರ್ಮಿಕರ ಮಹಾನ್ ಕತೆ ಇದರಲ್ಲಿ ನಿರೂಪಿತವಾಗಿದೆ. 

1902ರಲ್ಲಿ ಸ್ವೀಡನ್ನಿನ ರಾಷ್ಟ್ರೀಯ ಶಿಕ್ಷಕ ಸಂಘದ ಕೋರಿಕೆಯ ಮೇರೆಗೆ ಮಕ್ಕಳಿಗಾಗಿ ಈಕೆ ಕಥಾರೂಪದ ಭೂಗೋಳವನ್ನು ಬರೆದುಕೊಟ್ಟಳು. ವಿವಿಧ ಪ್ರದೇಶಗಳ ಪ್ರಕೃತಿ ಲಕ್ಷಣಗಳು, ಸಸ್ಯ ಹಾಗೂ ಪ್ರಾಣಿ ಸಂಪತ್ತು, ಖನಿಜಸಂಪತ್ತು, ಜನಪದ ಸಂಸ್ಕøತಿ ಎಲ್ಲವನ್ನೂ ಒಳಗೊಂಡ ದಿ ವಂಡರ್‍ಫುಲ್ ಅಡ್ವೆಂಚರ್ಸ್ ಆಫ್ ನಿಲ್ಸ್ (1906-07) ಎಂಬ ಕೃತಿ ಎರಡು ಸಂಪುಟಗಳಲ್ಲಿ ಪ್ರಕಟವಾಗಿದೆ. ಇದೊಂದು ಮಕ್ಕಳ ಅಸಾಧಾರಣವಾದ ಪಠ್ಯಪುಸ್ತಕ. ಬಾಲಸಾಹಿತ್ಯದ ಒಂದು ಮಹೋನ್ನತ ಕೃತಿ ಎಂದು ಪ್ರಸಿದ್ಧವಾಗಿದೆ. 
ಒಂದನೆಯ ಮಹಾಯುದ್ಧದ ಕಾಲದಲ್ಲಿ ಈಕೆಯ ಬರೆಹ ಕೊಂಚ ಕುಂಠಿತವಾಗಿತ್ತು. ಬಾನ್‍ಲಿಸ್ಟ್ (1918), ದಿ ಔಟ್‍ಕ್ಯಾಸ್ಟ್ (1920)-ಇವು ಯುದ್ಧವಿರೋಧಿ ಹಾಗೂ ಶಾಂತಿ ಪ್ರಚಾರದ ಕಾದಂಬರಿಗಳು. ಆ ತನಕದ ಕಾದಂಬರಿಗಳೆಲ್ಲ ಒಂದೇ ಬಗೆಯ ವಿಶಿಷ್ಟ ಲಕ್ಷಣಗಳಿಂದ ಕೂಡಿದ ಒಂದು ಮಟ್ಟದ ಕೃತಿಗಳಾದರೆ ಅನಂತರದಲ್ಲಿ ಬರೆದ ಕೃತಿಗಳಲ್ಲಿ ಬಹು ಎತ್ತರದ ಮಟ್ಟವನ್ನು ಮುಟ್ಟಿದ ಕೃತಿಗಳೆಂದರೆ ಲ್ಯೂವೆನ್ ಸ್ಕ್ಯೂಲ್ಡ್ ಸೈಕಲ್ ನ ಡೆನ್ ಲ್ಯೂವೆನ್ ಸ್ಕ್ಯೂಲ್ಡ್ ಸಾರಿಂಗೆನ್ (1924), ದಿ ರಿಂಗ್ ಆಫ್ ದಿ ಲ್ಯೂವೆನ್ ಸ್ಕ್ಯೂಲ್ಡ್(1931), ಪಾರ್ಲಟ್ ಲ್ಯೂವೆನ್ ಸ್ಕ್ಯೂಲ್ಡ್(1925), ಆನಾಸ್ವೇರ್ಡ್(1928). ಹಿಂದಿನ ಕೃತಿಗಳಲ್ಲಿ ಕಂಡುಬರುವ ಉತ್ಕಟ ರೊಮಾಂಟಿಕ್ ಮನೋಭಾವದ ಬದಲು ವ್ಯಕ್ತಿಯ ಹಾಗೂ ಮಾನವ ಸಮಾಜದ ವಿಮರ್ಶನಾತ್ಮಕ ಪಕ್ವ ಅವಲೋಕನವನ್ನು ಈ ಕಾದಂಬರಿಗಳಲ್ಲಿ ಕಾಣುತ್ತೇವೆ. ಮುರ್ಬಾಕ್ಕಾ(1922), ದಿ ಸ್ಟೋರಿ ಆಫ್ ಮನೋರ್(1924), ಯೆ ಬಾನ್ರ್ಸ್ ಮೆ ಮೋ ವಾರೆರ್(1930), ಮೆಮೊರಿಸ್ ಆಫ್ ಮೈ ಚೈಲ್ಡ್‍ಹುಡ್(1934), ದಾಗ್ ಬುಕ್ ಫ್ಯೂರ್ ಸೆಲ್ಮಾ ಲಾಗರ್‍ಲ್ಯೂಫ್(1932), ದಿ ಡೈರಿ ಆಫ್ ಸೆಲ್ಮಾ ಲಾಗರ್‍ಲ್ಯೂಫ್, (1936), ಫ್ರಾನ್‍ಸ್ಕಿಲ್ಡಾ ಟೈಡರ್ (ಎರಡು ಸಂಪುಟಗಳಲ್ಲಿ), ಹ್ಯೂಸ್ಟ್(1933), ಹಾರ್ವೆಸ್ಟ್(1934) - ಇವು ಈಕೆಯ ಆತ್ಮಕಥನರೂಪದ ಬರೆಹಗಳು. 

ಈಕೆಯ ಕೃತಿಗಳಲ್ಲೆಲ್ಲ ಮಹಾಕಾವ್ಯದ ಪ್ರತಿಭೆ, ಅತೀಂದ್ರಿಯ ಅನುಭವಗಳ ಕಡೆಗಿರುವ ಒಲವು, ಸಾಮರಸ್ಯದ ಪ್ರಜ್ಞೆ ಸುವ್ಯಕ್ತವಾಗಿವೆ. ಈ ಅಂಶಗಳನ್ನು ಕೆಲವು ವಿಮರ್ಶಕರು ಮೆಚ್ಚಿ ಪ್ರಶಂಸಿಸಿದ್ದರೆ, ಇನ್ನು ಕೆಲವು ವಿಮರ್ಶಕರು ಹಲವು ಸಂದರ್ಭಗಳಲ್ಲಿ ಈಕೆ ಇಂದ್ರಿಯಗ್ರಾಹ್ಯ ಸತ್ಯವನ್ನು ಬಲಿಗೊಟ್ಟು ಲೋಕಾತೀತ ಸತ್ಯವನ್ನು ಪ್ರತಿಪಾದಿಸುತ್ತಾಳೆಂದು ತೀವ್ರವಾಗಿ ಆಕ್ಷೇಪಿಸಿದ್ದಾರೆ. ಮತ್ತೆ ಕೆಲವರು ಈಕೆಯ ತೀರ ಸರಳೀಕೃತ ಮನೋವೈe್ಞÁನಿಕ ದೃಷ್ಟಿಯನ್ನೂ ನೇರ ನೀತಿಬೋಧನ ಚಾಪಲ್ಯವನ್ನೂ ಅಸಹಜ ಶಿಷ್ಟಶೈಲಿಯನ್ನೂ ಕಟುವಾಗಿ ಟೀಕಿಸಿದ್ದಾರೆ. ಹೀಗೆ ವಿವಾದಕ್ಕೊಳಗಾದರೂ ಈಕೆ ಪಡೆದ ವಿಶ್ವವಿಖ್ಯಾತಿ ಬೇರಾವ ಸ್ವೀಡಿಷ್  ಸಾಹಿತಿಗೂ ದೊರೆತಿಲ್ಲ. ಈಕೆಯ ಕೃತಿಗಳು ಮೂವತ್ತಕ್ಕೂ ಹೆಚ್ಚು ವಿದೇಶಿ ಭಾಷೆಗಳಿಗೆ ಅನುವಾದವಾಗಿವೆ; ನಾಟಕ ಚಲನಚಿತ್ರಗಳಾಗಿ ರೂಪಾಂತರಗೊಂಡಿವೆ.
 
ಕಾಲ್ಪನಿಕ ಕಟ್ಟುಕಥೆಗಳನ್ನು ಆಧುನಿಕ ವೈಚಾರಿಕ ಮನಸ್ಸಿಗೆ ಹಿಡಿಸು ವಂತೆ ಹೇಳುವ ವಿಶಿಷ್ಟಸಾಮಥ್ರ್ಯ, ಅದ್ವಿತೀಯವಾದ ಆಕರ್ಷಕ ಕಥನ ಕಲೆ, ಅಂತ:ಸ್ಫುರಣ ಪ್ರೇರಿತವಾದ ಕಲ್ಪನೆ, ಪಾತ್ರ ಹಾಗೂ ಕಾಲವೈವಿಧ್ಯ ಈಕೆಯ ಕೃತಿಗಳಲ್ಲಿ ಕಂಡುಬರುವ ಶ್ರೇಷ್ಠ ಸಾಹಿತ್ಯಾಂಶಗಳು. ಈಕೆ ಶ್ರೇಷ್ಠ ಕಥೆಗಾರ್ತಿ. ವಾಸ್ತವಿಕ ಸಾಮಾಜಿಕ ಜೀವನ ಚಿತ್ರಣಕ್ಕಿಂತ ರಮ್ಯವಾದ ಕಲ್ಪನಾಲೋಕ ವಿಚಾರ ಈಕೆಗೆ ನೈಜ ಅನುಭವ. ಈಕೆಯ ಕಥೆಗಳು ಆಬಾಲವೃದ್ಧರೆಲ್ಲರಿಗೂ ಹಿಡಿಸುತ್ತವೆ. ವಯಸ್ಸಾದಂತೆ ಈಕೆಯ ಬೌದ್ಧಿಕ ದಿಗಂತ ವಿಸ್ತಾರವಾಗಲಿಲ್ಲವಾದರೂ ಜೀವನಾನುಭವ ಮಾತ್ರ ಗಹನವಾಗುತ್ತ ಹೋಯಿತು. ಕ್ರೈಸ್ತ ಧಾರ್ಮಿಕ ಮಡಿವಂತಿಕೆಯ ಬದಲು ಪ್ರಧಾನವಾಗಿ ವ್ಯಕ್ತವಾಗುವ ನೈತಿಕ ಸತ್ತ್ವ ಕ್ರೈಸ್ತಧರ್ಮದಿಂದಲೇ ಹೊಮ್ಮಿದುದು. ಆತ್ಮದ ಅಮರತೆಯಲ್ಲಿ, ಅನುಭವ ಸತ್ಯವಾದ ದೈವೀಚೈತನ್ಯದ ಅಸ್ತಿತ್ವದಲ್ಲಿ ಈಕೆಗೆ ಅಪಾರ ನಂಬಿಕೆ. ನಿಸ್ವಾರ್ಥವಾದ ಪ್ರೇಮ, ಸದ್ಗುಣ ಮತ್ತು ಒಳ್ಳೆಯತನಗಳಿಗೇ ಅಂತಿಮ ಜಯ; ಸ್ವಾರ್ಥ, ನೀಚತನ, ಕ್ರೌರ್ಯಗಳಿಗೆ ಕೊನೆಯಲ್ಲಿ ಸೋಲು ಖಂಡಿತ ಎಂಬುದೇ ಬದುಕಿನಲ್ಲೂ ಸಾಹಿತ್ಯದಲ್ಲೂ ಈಕೆಯ ಅನುಭವಸಿದ್ಧವಾದ ಜೀವನತತ್ತ್ವವಾಗಿದೆ.

ಈಕೆಗೆ ಅನೇಕ ಗೌರವ, ಪ್ರಶಸ್ತಿಗಳು ದೊರಕಿವೆ. 1904ರಲ್ಲಿ ಸ್ವೀಡಿಷ್ ಅಕಾಡೆಮಿ ಚಿನ್ನದ ಪದಕವನ್ನಿತ್ತು ಗೌರವಿಸಿತ್ತು. 1909ರಲ್ಲಿ ಪ್ರತಿಷ್ಠಿತ ನೊಬೆಲ್ ಬಹುಮಾನ ಲಭಿಸಿತು. 1907ರಲ್ಲಿ ಉಪ್ಸಲ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಸನ್ಮಾನಿಸಿತು. 
1940ರಲ್ಲಿ  ಎರಡನೆಯ  ಮಹಾಯುದ್ಧದ  ಧಗೆ  ಸ್ವೀಡನ್‍ಗೂ  ತಟ್ಟಿದಾಗ ಈಕೆ ಅತೀವವಾಗಿ ಘಾಸಿಗೊಂಡಳು. ಅದೇ ವರ್ಷ ಕರುಳಿನ ಬೇನೆಗೆ ಸಂಬಂಧಿಸಿದ ರೋಗಕ್ಕೆ ಗುರಿಯಾಗಿ ಕಡೆಯುಸಿರೆಳೆದಳು.		
(ಕೆ.ಬಿ.ಪಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ